ಉದಯರಶ್ಮಿ ದಿನಪತ್ರಿಕೆ
ಇಂಡಿ: ಇಂದಿನ ಜನತೆ ಆರೋಗ್ಯಯುತ, ಸದೃಢ-ಸಶಕ್ತರಾಗಿ ಸ್ವಾಭಿಮಾನದಿಂದ ಬದುಕಬೇಕೆಂದರೆ ಸ್ವಚ್ಛತೆಯ ಅಭ್ಯಾಸಗಳನ್ನು ಪ್ರತಿನಿತ್ಯ ರೂಢಿಸಿಕೊಂಡು, ಸ್ವಚ್ಛತೆಯನ್ನು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಸಿಕೊಳ್ಳಬೇಕು
ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು.
ಅವರು ಶುಕ್ರವಾರದಂದು ಪಟ್ಟಣದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ‘ಸ್ವಚ್ಛತೆಯೇ ಸೇವೆ’ ಅಭಿಯಾನದಡಿ “ಸ್ವಭಾವ ಸ್ವಚ್ಛತೆ-ಸಂಸ್ಕಾರ ಸ್ವಚ್ಛತೆ”
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಆರೋಗ್ಯದ ಮೂಲವೇ ಸ್ವಚ್ಛತೆ ಮತ್ತು ನೈರ್ಮಲ್ಯವಾಗಿದ್ದು, ಇಂದಿನ ಯುವಕರು ಸಮೃದ್ಧ ಸಮಾಜವನ್ನು ನಿರ್ಮಿಸಲು ತಮ್ಮ ದಾಪುಗಾಲನ್ನು ಹಾಕಬೇಕು.’ಸ್ವಚ್ಛ ಮೇವ ಜಯತೇ’ ಎಂದು ಜಗತ್ತಿಗೆಲ್ಲ ಸಾರೋಣ. ಪ್ರತಿಯೊಬ್ಬರು ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿದಾಗ ಮಾತ್ರ ಮಹಾತ್ಮ ಗಾಂಧೀಜಿಯವರ ಸ್ವಚ್ಛ ಭಾರತದ ಕನಸು ನನಸಾಗುತ್ತದೆ ಎಂದು ಹೇಳಿದರು.
ಪ್ರಭಾರಿ ಪ್ರಾಚಾರ್ಯ ಪರಶುರಾಮ ರಜನಿಕರ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಸ್ವಚ್ಛತೆಯನ್ನು ಸೇವೆ’ ಎಂದು ಪರಿಗಣಿಸಿ ಅದಕ್ಕೆ ಹೆಚ್ಚು ಒತ್ತು ನೀಡಿದ್ದ ಗಾಂಧೀಜಿ ಅವರು, ಸಾರ್ವಜನಿಕ ಸ್ವಚ್ಛತೆಯ ಮಹತ್ವವನ್ನು ಸಾರಿದ್ದರು.
ಪ್ರತಿಯೊಬ್ಬರ ಮನದಲ್ಲೂ ಸ್ವ-ಆಸಕ್ತಿಯಿಂದ ಸ್ವಚ್ಛತೆಯ ಅರಿವು ಜಾಗೃತವಾದಾಗ ಸ್ವಚ್ಛ ಭಾರತದ ಕನಸು ನನಸಾಗುತ್ತದೆ ಎಂದು ಹೇಳಿದರು.
ಉಪನ್ಯಾಸಕರಾದ ಗಂಗಾಧರ ಭಾಗೆಳ್ಳಿ, ರಮೇಶ ಮೇತ್ರಿ, ಸಂತೋಷ ಜಾಧವ, ಪ್ರೇಮಾನಂದ ದೇಸಾಯಿ, ರವಿ ಹಾದಿಮನಿ,ಅಬ್ದುಲ್ಲಾ, ರೇಶ್ಮಾ ಸೇರಿದಂತೆ ಸಂಸ್ಥೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮಕ್ಕೂ ಮುನ್ನ ‘ಸ್ವಚ್ಛತೆಯೇ ಸೇವೆ’ ಅಭಿಯಾನದಡಿ ಪ್ರತಿಜ್ಞಾ ವಿಧಿ ಸ್ವೀಕಾರ, ಸ್ವಚ್ಛತಾ ಶ್ರಮದಾನದ ಜೊತೆಗೆ ಸಸಿ ನೆಡುವ ಕಾರ್ಯಕ್ರಮ ಸಹ ಹಮ್ಮಿಕೊಂಡು, ವಿದ್ಯಾರ್ಥಿಗಳಲ್ಲಿ ಸ್ವಚ್ಛತೆ ಮತ್ತು ಪರಿಸರದ ಜಾಗೃತಿ ಮೂಡಿಸಲಾಯಿತು.

