ಜಾಗತಿಕ ಲಿಂಗಾಯತ ಮಹಾಸಭಾ ಪದಾಧಿಕಾರಿಗಳು ಮತ್ತು ಲಿಂಗಾಯತ ಸಂಘಟನೆಗಳಿಂದ ಎಸ್ಪಿ ಗೆ ದೂರು
ಉದಯರಶ್ಮಿ ದಿನಪತ್ರಿಕೆ
ಮಂಡ್ಯ: ಕರ್ನಾಟಕ ಸಾಂಸ್ಕೃತಿಕ ನಾಯಕ “ವಿಶ್ವಗುರು” ಬಸವಣ್ಣನವರನ್ನು ಅವಹೇಳನ ಮಾಡಿರುವ ಲೇಖಕ ರವಿ ಹಂಜ್ ಹಾಗೂ ಬಸವ ಮಂಟಪ ಕೃತಿಯ ಪ್ರಕಾಶಕರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸೂಪರ್ ರಾಣಿ ಅವರಿಗೆ ಜಾಗತಿಕ ಲಿಂಗಾಯತ ಮಹಾಸಭಾ ಪದಾಧಿಕಾರಿಗಳು ಕಂಬಳಗೂಡು ಚನ್ನಬಸವೇಶ್ವರ ಜ್ಞಾನಪೀಠದ ಡಾ. ಚನ್ನಬಸವಾನಂದ ಸ್ವಾಮೀಜಿ ನೇತೃತ್ವದಲ್ಲಿ
ದೂರು ನೀಡಿದರು.
ನಗರದಲ್ಲಿರುವ ಎಸ್ಪಿ ಕಚೇರಿ ಮುಂದೆ ಜಮಾಮಣೆಗೊಂಡ ಮಹಾಸಭಾ ಪದಾಧಿಕಾರಿಗಳು ಬಸವಣ್ಣ ಅವರ ಘನತೆ ಹಾಗೂ ಗೌರವಕ್ಕೆ ಅವಹೇಳನಕಾರಿ ಮಾಡಿರುವ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು
ಬಳಿಕ ಮಾತನಾಡಿದ ಶ್ರೀ ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷ ಡಾ. ಚನ್ನಬಸವಾನಂದ ಸ್ವಾಮೀಜಿ, ಅನಿವಾಸಿ ಭಾರತೀಯನಾದ ರವಿ ಹಂಜ್ (ರವಿ ಹಂಜಗಿಮಠ) ಎಂಬ ವ್ಯಕ್ತಿಯು ಇತ್ತೀಚೆಗೆ “ವಿಶ್ವವಾಣಿ” ವಾಹಿನಿಯ ಮೂಲಕ ಸಂದರ್ಶನವನ್ನು ನೀಡಿ ಬಸವಣ್ಣನವರ ಬಗ್ಗೆ ಅತ್ಯಂತ ಕೀಳು ಭಾಷೆಯನ್ನು ಬಳಸಿ ಕಳ್ಳ, ಸುಳ್ಳ, ಕೊಲೆಗಾರ ಎಂದು ಏಕವಚನದಲ್ಲಿ ನಿಂದಿಸಿರುತ್ತಾನೆ. ವಚನ ಸಾಹಿತ್ಯದ ಬಗ್ಗೆಯೂ ಹಾಗೂ ಹನ್ನೆರಡನೆ ಶತಮಾನದ ಸಮಸ್ತ ಶರಣರನ್ನು ನಿಂದಿಸಿರುತ್ತಾನೆ. ಅಲ್ಲದೆ ಲಿಂಗಾಯತರನ್ನು “ಲಿಂಗಾಹತರು” ಎಂದು ಸಂಬೋಧಿಸಿ ಅವಹೇಳನ ಮಾಡಿ ಲಿಂಗಾಯತರ ಮನಸನ್ನು ಘಾಸಿಗೊಳಿಸಿದ್ದಾನೆ ಎಂದು ಕಿಡಿ ಕಾರಿದರು.
ಇದು ಕೇವಲ ಬಸವಣ್ಣನವರಿಗೆ ಹಾಗೂ ಸಮಸ್ತ ಶರಣರಿಗೆ ಮಾಡಿರುವ ಅಪಮಾನಷ್ಟೇ ಅಲ್ಲ, ಬಸವಣ್ಣನವರನ್ನು “ಕರ್ನಾಟಕದ ಸಾಂಸ್ಕೃತಿಕ ನಾಯಕ” ಎಂದು ಘೋಷಿಸಿರುವ ಕರ್ನಾಟಕ ಸರಕಾರಕ್ಕೆ ಮಾಡಿರುವ ಘೋರ ಅಪಮಾನವಾಗಿದೆ. ಜಗತ್ತಿನಲ್ಲಿರುವ ಸಮಸ್ತ ಬಸವಾಭಿಮಾನಿಗಳ ಭಾವನೆಗಳೊಂದಿಗೆ ಚೆಲ್ಲಾಟವಾಡಿದ್ದಾನೆ. ಇದರಿಂದಾಗಿ ಸಮಾಜದಲ್ಲಿ ಶಾಂತಿ ಹಾಗೂ ಸೌಹಾರ್ದತೆ ಕದಡುವ ವಾತಾವರಣ ನಿರ್ಮಾಣ ಮಾಡಿದ್ದಾನೆ ಎಂದು ಆಕ್ರೋಶ ಹೊರ ಹಾಕಿದರು.
ಬಳಿಕ ಮಾತನಾಡಿದ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಎಂ ಶಿವಕುಮಾರ್, ಬಸವದ್ರೋಹಿ ರವಿ ಹಂಜ್ ಎಂಬ ವ್ಯಕ್ತಿಯನ್ನು ಬಸವಾದಿ ಶರಣರಿಗೆ ಅವಮಾನ ಮಾಡಿದ ಪ್ರಕರಣದಲ್ಲಿ ಬಿ.ಎನ್.ಎಸ್ ಕಾಯ್ದೆಯ ಅಡಿಯಲ್ಲಿ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು
ಈ ಸಂದರ್ಭದಲ್ಲಿ ರಾಷ್ಟ್ರೀಯ ಬಸವದಳ ಮಹಿಳಾ ಗಣದ ಅಧ್ಯಕ್ಷೆ ಜಗದೇವಿ ಜಟ್ಟಿ ಕಲ್ಬುರ್ಗಿ, ಬಸವ ಫೌಂಡೇಶನ್ ಅಧ್ಯಕ್ಷ ಅಪರ್ಣ, ಬಸವಶ್ರೀ ಕಟ್ಟಾಳೆ, ಜ್ಯೋತಿ ಕಟ್ಟಾಳೆ, ಲಕ್ಷ್ಮಿ ಕಣಜ ಸೇರಿದಂತೆ ಹಲವರು ಹಾಜರಿದ್ದರು.

