ಉದಯರಶ್ಮಿ ದಿನಪತ್ರಿಕೆ
ಇಂಡಿ: ಅನುಸೂಚಿತ ಜಾತಿ, ಪಂಗಡದ ಜನರ ಮೇಲೆ ದೌರ್ಜನ್ಯ ನಡೆದ ದೂರು ದಾಖಲಾದರೆ ತ್ವರಿತವಾಗಿ ಕ್ರಮ ಕೈಕೊಳ್ಳಬೇಕು ಇಲ್ಲದಿದ್ದರೆ ಸಂಬಂದಿತ ಅಧಿಕಾರಿವಿರುದ್ಧ ಕ್ರಮ ಕೈಕೊಳ್ಳಲಾಗುವುದು ಎಂದು ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.
ಪಟ್ಟಣದ ಮಿನಿ ವಿಧಾನಸೌಧದ ಕಂದಾಯ ಉಪವಿಬಾಗಾಧಿಕಾರಿಗಳ ಸಭಾಭವನದಲ್ಲಿ ನಡೆದ ಉಪವಿಭಾಗೀಯ ಮಟ್ಟದ ಎಸ್ ಸಿ, ಎಸ್ ಟಿ ದೌರ್ಜನ್ಯ ನಿಯಂತ್ರಣ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಚೇರಿಗೆ ಆಗಮಿಸುವ ಸಾರ್ವಜನಿಕರೊಂದಿಗೆ ಅಧಿಕಾರಿ ಹಾಗೂ ಸಿಬ್ಬಂದಿವರ್ಗ ಸೌಜನ್ಯದಿಂದ ವರ್ತಿಸಬೇಕು. ಪರಿಶಿಷ್ಠ ಜಾತಿ, ಪಂಗಡದವರು ವಿವಿಧ ಯೋಜನೆಗಳ ಸಾಲ ಸೌಲಭ್ಯ ಕೋರಿ ಸಲ್ಲಿಸಿರುವ ಅರ್ಜಿಗಳನ್ನು ಪರಿಗಣಿಸಿ ಶೀಘ್ರ ಸೌಲಭ್ಯ ಒದಗಿಸಬೇಕು ಎಂದು ಸೂಚಿಸಿದರು.
ಡಿ.ವಾಯ್.ಎಸ್.ಪಿ ಜಗದೀಶ ಮಾತನಾಡಿ ದೌರ್ಜನ್ಯದಲ್ಲಿ ನೊಂದ ಸಂತೃಸ್ತರಿಗೆ ತಕ್ಷಣ ಇಲಾಖೆಯಿಂದ ಪರಿಹಾರ ಧನ ನೀಡಲು ಕೇಳಿಕೊಂಡರು.
ಸಹಾಯಕ ನಿರ್ದೇಶಕ ಸಮಾಜ ಕಲ್ಯಾಣ ಇಲಾಖೆ ಇಂಡಿಯ ಉಮೇಶ ಲಮಾಣಿ ಮಾತನಾಡಿ ಜನೇವರಿ ೨೦೨೪ ರಿಂದ ಇಲ್ಲಿಯ ವರೆಗೆ ೧೭ ಪ್ರಕರಣ ದಾಖಲಾಗಿದ್ದು ಅದರಲ್ಲಿ ೯ ಪ್ರಕರಣಗಳಿಗೆ ಪರಿಹಾರ ನೀಡಿದ್ದು ೮ ಪ್ರಕರಣಗಳ ಪರಿಹಾರ ಸಧ್ಯದಲ್ಲಿಯೇ ಬರಲಿದೆ ಎಂದರು.
ಸಭೆಯಲ್ಲಿ ಇಂಡಿಯ ತಹಸೀಲ್ದಾರ ಬಿ.ಎಸ್.ಕಡಕಬಾವಿ, ನಾಮ ನಿರ್ದೇಶನ ಸದಸ್ಯರಾದ ಶಿವಾನಂದ ಮೂರಮನ, ಸತ್ಯಣ್ಣ ಹಡಪದ, ಸಿಂದಗಿ ಸಮಾಜ ಕಲ್ಯಾಣ ಅಧಿಕಾರಿ ಭವಾನಿ ಪಾಟೀಲ ಮತ್ತಿತರಿದ್ದರು.

