ಉದಯರಶ್ಮಿ ದಿನಪತ್ರಿಕೆ
ಯಡ್ರಾಮಿ: ತಾಲೂಕಿನ ಮಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ನೂತನವಾಗಿ ಬಸನಗೌಡ ಮಾಲಿ ಪಾಟೀಲ, ಉಪಾಧ್ಯಕ್ಷ ಸ್ಥಾನಕ್ಕೆ ರೂಪಾಬಾಯಿ ವಾಲು ಚವ್ಹಾಣ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ ಶಶಿಕಲಾ ಪಾದಗಟ್ಟಿ ಘೋಷಣೆ ಮಾಡಿದರು.
ಈ ಹಿಂದಿನ ಅಧ್ಯಕ್ಷೆ ರಾಜಿನಾಮೆ ನೀಡಿದ ಪ್ರಯುಕ್ತ ಗುರುವಾರ ನಡೆದ ಚುನಾವಣೆಯಲ್ಲಿ ಸಾಮಾನ್ಯ ವರ್ಗಕ್ಕೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಬಸನಗೌಡ ಮಾಲಿ ಪಾಟೀಲ ಮತ್ತು ಕಂಟೆಪ್ಪ ಪೂಜಾರಿ ಚೊಣ್ಣಿ, ಈ ಇಬ್ಬರು ಕಾಂಗ್ರೆಸ್ ಬೆಂಬಲಿತ ಸದಸ್ಯರೆ ಆಗಿದ್ದರಿಂದ ಬಹಳ ತುರುಸಿನ ಜಿದ್ದಾ ಜಿದ್ದಿ ನಡೆದಿತ್ತು. ಅಧ್ಯಕ್ಷ ಸ್ಥಾನಕ್ಕೆ ಒಂದೇ ಪಕ್ಷದ ಎರಡು ನಾಮಪತ್ರ ಸಲ್ಲಿಕೆ ಆಗಿದ್ದರಿಂದ ಗುಪ್ತ ಮತದಾನ ನಡೆಸಲಾಯಿತು. ಗುಪ್ತ ಮತದಾನದಲ್ಲಿ ಒಟ್ಟು ಚಲಾವಣೆಗೊಂಡ 19 ಮತಗಳು ಪೈಕಿ ಬಸನಗೌಡ ಮಾಲಿ ಪಾಟೀಲ ಹನ್ನೊಂದು ಮತಗಳನ್ನು ಪಡೆದರೆ, ಕಂಟೆಪ್ಪ ಪೂಜಾರಿ ಚೋಣ್ಣಿ ಎಂಟು ಮತಗಳನ್ನು ಪಡೆದರು. ಮೂರು ಮತಗಳ ಅಂತರದಿಂದ ಬಸನಗೌಡ ಪಾಟೀಲ ಜಯ ಗಳಿಸಿದರು.
ಪರಿಶಿಷ್ಟ ಜಾತಿಗೆ (ಮಹಿಳೆ) ಮೀಸಲಾದ ಉಪಾಧ್ಯಕ್ಷ ಸ್ಥಾನಕ್ಕೆ ರೂಪಾಬಾಯಿ ಚೌವ್ಹಾಣ ಏಕೈಕ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದರಿಂದ ಸಹಜವಾಗಿ ರೂಪಾಬಾಯಿ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರು.
ಈ ವೇಳೆ ಅತಿ ಸೂಕ್ಷ್ಮ ಮತಗಟ್ಟೆ ಆಗಿರುವ ಕಾರಣ ಯಡ್ರಾಮಿ ತಹಸಿಲ್ದಾರ್ ಶಶಿಕಲಾ ಪಾದಗಟ್ಟಿ ಅವರು ಕಲಂ 144 ಜಾರಿಗೆಗೊಳಿಸಿ ಸಾರ್ವಜನಿಕರಿಗೆ ಅನವಶ್ಯಕವಾಗಿ ಓಡಾಡದಂತೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಿಷೇಧಿಸಲಾಗಿತ್ತು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭೀಮರಾಯ ಪೂಜಾರಿ ಇದ್ದರು. ಯಡ್ರಾಮಿ ಪಿಎಸ್ಐ ವಿಶ್ವನಾಥ ಮುದರೆಡ್ಡಿ ನೇತೃತ್ವದಲ್ಲಿ ಮೂರು ಠಾಣೆಯ ಪೊಲೀಸ್ ಸಿಬ್ಬಂದಿಗಳಿಂದ ಬಂದೋ ಬಸ್ತ್ ಕಲ್ಪಿಸಲಾಗಿತ್ತು.

