ವಿಜಯಪುರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಗಿರಿಜನ ಉಪಯೋಜನೆಯಡಿ ಡಿ.೧೦ ರಂದು ಕೊಲ್ಹಾರ ತಾಲೂಕಿನ ಮುಳವಾಡ ಗ್ರಾಮ ಪಂಚಾಯತ್ ಆವರಣದ ಬಯಲು ವೇದಿಕೆಯಲ್ಲಿ ಗಿರಿಜನ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಅಂದು ಸಂಜೆ ೫-೩೦ಕ್ಕೆ ಬಸ್ ನಿಲ್ದಾಣದಿಂದ ಅಗಸಿ ಮಾರ್ಗವಾಗಿ ಗ್ರಾಮ ಪಂಚಾಯತ್ ಆವರಣದವರೆಗೆ ಮೆರವಣಿಗೆ ನಡೆಯಲಿದೆ. ಸಂಜೆ ೬-೩೦ಕ್ಕೆ ಗಿರಿಜನ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ದಿ ಖಾತೆ ಸಚಿವರಾದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಉದ್ಘಾಟಿಸಲಿದ್ದಾರೆ. ಜವಳಿ ಕಬ್ಬು ಅಭಿವೃದ್ದಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರ್ಕಾರದ ನವದೆಹಲಿ ವಿಶೇಷ ಪ್ರತಿನಿಧಿ-೨ ಪ್ರಕಾಶ ಹುಕ್ಕೇರಿ, ಸಂಸದ ರಮೇಶ ಜಿಗಜಿಣಗಿ, ಶಾಸಕರುಗಳಾದ ಯಶವಂತರಾಯಗೌಡ ಪಾಟೀಲ, ಹಣಮಂತ ನಿರಾಣಿ, ಪ್ರಕಾಶ ರಾಠೋಡ, ಸುನೀಲಗೌಡ ಬಿ.ಪಾಟೀಲ, ಪಿ.ಎಚ್.ಪೂಜಾರ, ಅಪ್ಪಾಜಿ ಸಿ.ಎಸ್.ನಾಡಗೌಡ, ವಿಠ್ಠಲ ಕಟಕದೊಂಡ, ಭೀಮನಗೌಡ(ರಾಜುಗೌಡ) ಬಸನಗೌಡ ಪಾಟೀಲ, ಅಶೋಕ ಮಲ್ಲಪ್ಪ ಮನಗೂಳಿ, ಮುಳವಾಡ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಹಣಮಂತ ಕಳಸಗೊಂಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಬಸವರಾಜ ಹೂಗಾರ ಅವರು ಭಾಗವಹಿಸಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕುಮಾರಿ ಅರ್ಚನಾ ಅವರಿಂದ ಸುಗಮ ಸಂಗೀತ, ಕುಮಾರಿ ರೇಣುಕಾ ಮತ್ತು ಸಂಗಡಿಗರಿಂದ ಹಕ್ಕಿ-ಪಿಕ್ಕಿ ಬುಡಕಟ್ಟು ನೃತ್ಯ, ಕಲಗುರ್ಕಿಯ ಭೀಮಪ್ಪ ಹನಮಂತ ದಳವಾಯಿ ಅವರಿಂದ ಹಂತಿ ಪದಗಳು, ಬಳ್ಳಾರಿಯ ಶ್ರೀಮತಿ ಎಂ.ಲಕ್ಷ್ಮೀ ಮತ್ತು ಸಂಗಡಿಗರಿಂದ ಸಮೂಹ ನೃತ್ಯ, ಹಳಿಯಾಳದ ಸಿದ್ದಪ್ಪ ಬಿರಾದಾರ ಮತ್ತು ಸಂಗಡಿಗರಿಂದ ಸೂತ್ರದ ಗೊಂಬೆ ಏಕಲವ್ಯ ಗುರುಭಕ್ತಿ, ಹಾಗೂ ನಿಡೋಣಿಯ ಬಾಳಪ್ಪ ಶಿವಪ್ಪ ತಳವಾರ ಮತ್ತು ಸಂಗಡಿಗರಿಂದ ಸಂಗ್ಯಾ ಬಾಳ್ಯಾ ಬಯಲಾಟ ಕಾರ್ಯಕ್ರಮಗಳು ಜರುಗಲಿವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ನಾಗರಾಜ್ ಅವರು ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
