ಉದಯರಶ್ಮಿ ದಿನಪತ್ರಿಕೆ
ಚಡಚಣ: ಮನೆಯ ಪಕ್ಕದಲ್ಲಿ ಬಿಡಿಸಿ ಸಂಗ್ರಹಿಸಿಟ್ಟಿದ್ದ ಹತ್ತಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಮಾರು 2.70 ಲಕ್ಷ ರೂ. ಮೌಲ್ಯದ ಹತ್ತಿ ಬೆಳೆ ಸುಟ್ಟು ಭಸ್ಮವಾದ ಘಟನೆ ಸಮೀಪದ ನಿವರಗಿ ಗ್ರಾಮದಲ್ಲಿ ಅ.20ರಂದು ನಡೆದಿದೆ.
ಗ್ರಾಮದ ನಿವಾಸಿ ನಾಗಪ್ಪ ಪ್ರಭು ಹೂಗಾರ (64) ಎಂಬ ಬಡ ರೈತ ಈ ಘಟನೆಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿವರಗಿ ಗ್ರಾಮದ ಸರ್ವೇ ನಂ. 231ಅ/1ರಲ್ಲಿರುವ ತಮ್ಮ ಜಮೀನಿನಲ್ಲಿ ಹತ್ತಿ ಬೆಳೆದಿದ್ದ ಅವರು, ಹೊಲದಿಂದ ಹತ್ತಿಯನ್ನು ಬಿಡಿಸಿ ಮನೆಯ ಪಕ್ಕದಲ್ಲಿ ಸಂಗ್ರಹಿಸಿಟ್ಟಿದ್ದರು. ಅ.20ರಂದು ಮಧ್ಯಾಹ್ನ ಸುಮಾರು 12.45ರ ವೇಳೆಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಅಂದಾಜು 26 ಕ್ವಿಂಟಲ್ ಹತ್ತಿ ಬೆಂಕಿಗೆ ಆಹುತಿಯಾಗಿದೆ. ಇದರಿಂದ ಸುಮಾರು ₹2,65,600 ಮೌಲ್ಯದ ಹತ್ತಿ ನಷ್ಟವಾಗಿದೆ ಎಂದು ತಿಳಿದುಬಂದಿದೆ.
ಈಗಾಗಲೇ ಮಳೆ ಕೊರತೆಯಿಂದ ಬೆಳೆ ನಿರೀಕ್ಷಿತ ಮಟ್ಟದಲ್ಲಿ ಬಾರದೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ರೈತನಿಗೆ, ಕೈಗೆ ಬಂದ ಹತ್ತಿಯೂ ಬೆಂಕಿಯಲ್ಲಿ ಸುಟ್ಟುಹೋಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೃಷಿಗಾಗಿ ಸಾಲ ಮಾಡಿಕೊಂಡಿದ್ದ ರೈತ, ಬೆಳೆದ ಬೆಳೆಯಿಂದ ಆದಾಯ ಪಡೆಯುವ ನಿರೀಕ್ಷೆಯಲ್ಲಿದ್ದರು. ಆದರೆ, ಆಕಸ್ಮಿಕ ಬೆಂಕಿ ಅವರ ನಿರೀಕ್ಷೆಗೆ ತಣ್ಣೀರೆರಚಿದ್ದು, ಮುಂದಿನ ಜೀವನ ನಿರ್ವಹಣೆ ಹಾಗೂ ಸಾಲ ಮರುಪಾವತಿ ಹೇಗೆ ಎಂಬ ಚಿಂತೆ ಎದುರಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಬೆಳೆ ನಷ್ಟವನ್ನು ಸಮಗ್ರವಾಗಿ ಪರಿಶೀಲಿಸಿ, ಸರ್ಕಾರದ ನಿಯಮಾನುಸಾರ ಪರಿಹಾರ ದೊರಕಿಸಿಕೊಡಬೇಕು ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಚಡಚಣ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

