ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬನ್ನಿ ತಗೋಂಡು ಬಂಗಾರವಾಗೋಣ ಎನ್ನುವ ನಮ್ಮ ಗ್ರಾಮ್ಯದ ವಾಡಿಕೆಯಂತೆ ಇಂದು ಗುರುವಾರ ತಮ್ಮ ಗೃಹ ಕಚೇರಿಯಲ್ಲಿ ಕೈಗಾರಿಕೆ, ಮೂಲ ಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಬಿ.ಪಾಟೀಲರು ಕ್ಷೇತ್ರದ ಜನ, ಜಿಲ್ಲೆಯ ಮುಖಂಡರು ಮತ್ತು ಜನತೆಯ ಜೊತೆಗೆ ಇಡೀ ದಿನ ಬನ್ನಿ ವಿನಿಮಯ ಮಾಡಿಕೊಂಡು ಶುಭ ಹಾರೈಸಿದರು.
ಜಿಲ್ಲೆಯ ಹಲವು ಭಾಗಗಳಿಂದಲ್ಲದೇ ಪಕ್ಕದ ಬೆಳಗಾವಿ, ಬಾಗಲಕೋಟೆ ಜಿಲ್ಲೆಯವರೂ ಕೂಡ ಈ ಉತ್ಸಾಹದಲ್ಲಿ ಭಾಗಿಯಾದರು.
ವಿಶೇಷವಾಗಿ ಸಚಿವರ ಸ್ವಕ್ಷೇತ್ರದ ಜನ ಹಾಗೂ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು.
ಮಹಿಳೆಯರು, ರೈತಾಪಿ ವರ್ಗ, ಸಂಘಟನೆಗಳವರು ಹಾಗೂ ವಿಶೇಷ ಚೇತನರು ಸೇರಿ ಸಾವಿರಾರು ಜನ ಸಚಿವರನ್ನು ಭೇಟಿಯಾಗಿ ವಿಜಯ ದಶಮಿಯ ಶುಭಾಶಯಗಳನ್ನು ಕೋರಿದರು.
ಬಂದಿದ್ದವರೊಂದಿಗೆ ಅನ್ಯೋನ್ಯತೆಯಿಂದ ಮಾತನಾಡಿದ ಅವರು, ಉಭಯ ಕುಶಲೋಪರಿ ವಿಚಾರಿಸುತ್ತ ಬರ್ರಿ ಎಂದು ಎಲ್ಲರಿಗೂ ಆಸ್ಥೆಯಿಂದ ಬನ್ನಿಯನ್ನು ನೀಡಿದರು. ಜತೆಗೆ ಎಲ್ಲೆಡೆ ಮಳೆಯಾಗದ ಸ್ಥಿತಿ, ಗಿಡ ನೆಡಬೇಕು ಎನ್ನುವ ಸಲಹೆಗಳ ಮಾತುಗಳನ್ನೂ ರೈತರೊಂದಿಗೆ ಆಡುತ್ತಿದ್ದರು. ಜನರ ಒತ್ತಡದ ನಡುವೆಯೂ ಕೆರೆಗೆ ನೀರಿಲ್ಲ, ನಮ್ಮ ಕೆನಾಲ್ಗೆ ನೀರು ಬಿಟ್ಟಿಲ್ಲ ಎನ್ನುವ ಮನವಿಗಳಿಗೂ ಸ್ಪಂದಿಸುತ್ತಿದ್ದದ್ದು ಅವರ ನೀರಾವರಿ ಎಡೆಗಿನ ಕಾಳಜಿಯ ವಿಶೇಷತೆ ತೋರಿಸುತ್ತಿತ್ತು.
ಹಲವು ಹಾಲಿ, ಮಾಜಿ ಶಾಸಕರಾದಿಯಾಗಿ ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಿಬ್ಬಂದಿ ಸಚಿವರನ್ನು ಭೇಟಿಯಾಗಿ ಹಬ್ಬದ ಸಡಗರಕ್ಕೆ ಸಾಕ್ಷಿಯಾದರು.

