ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮಧ್ವಾಚಾರ್ಯರ ಪ್ರತಿಪಾದಿಸಿದ ಚಿಂತನೆಗಳು ಸಕಾಲಿಕವಾಗಿವರ ಎಂದು ತಹಶೀಲ್ದಾರ್ ಪ್ರಶಾಂತ ಚನಗೊಂಡ ಹೇಳಿದರು.
ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಶ್ರೀ ಜಗದ್ಗುರು ಶ್ರೀ ಮಧ್ವಾಚಾರ್ಯರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಧ್ವಾಚಾರ್ಯರು ಪ್ರತಿಪಾದಿಸಿದ ತತ್ವಗಳಲ್ಲಿ ಭಕ್ತಿ, ಜ್ಞಾನ, ಪರಸ್ಪರ ಗೌರವ ಹಾಗೂ ಸಾಮಾಜಿಕ ಸಾಮರಸ್ಯಕ್ಕೆ ವಿಶೇಷ ಆದ್ಯತೆ ನೀಡಲಾಗಿತ್ತು. ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಾಮರಸ್ಯದ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಅವರು ಹೇಳಿದರು.
ಉಪನ್ಯಾಸ ನೀಡಿ, ಪಂಡಿತ ಶ್ರೀ ನರಹರಿ ಆಚಾರ್ಯ ಅವರು, ಶ್ರೀ ಮಧ್ವಾಚಾರ್ಯರ ಜೀವನ, ಆಧ್ಯಾತ್ಮಿಕ ಸಾಧನೆ, ತಾತ್ವಿಕ ಚಿಂತನೆಗಳು ಹಾಗೂ ಅವರು ಅನುಸರಿಸಿದ ಮಾರ್ಗದ, ತತ್ವಾದರ್ಶಗಳ ಮಹತ್ವವನ್ನು ವಿವರಿಸಿ, ಅವರ ಬೋಧನೆಗಳನ್ನು ಇಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯವನ್ನು ತಿಳಿಸಿದರು.
ಪ್ರತಿಯೊಬ್ಬರೂ ಭಕ್ತಿಯ ಮೂಲಕ ದೇವರನ್ನು ಆರಾಧಿಸಬಹುದು ಎಂಬ ಸಂದೇಶವನ್ನು ಮಧ್ವಾಚಾರ್ಯರು ಸಾರಿದ್ದಾರೆ. ಭಕ್ತಿಗೆ ಜಾತಿಯ ಹಂಗಿಲ್ಲ ಎಂಬ ಈ ಆಶಯವು ಎಲ್ಲರಿಗೂ ಆಧ್ಯಾತ್ಮಿಕ ಮಾರ್ಗದಲ್ಲಿ ಸಾಗಲು ಅವಕಾಶವಿದೆ ಎಂಬುದನ್ನು ಸಾರುತ್ತದೆ. ಇಂತಹ ಉದಾತ್ತ ಚಿಂತನೆಗಳನ್ನು ಅರಿತುಕೊಂಡು ಸಮಾಜದಲ್ಲಿ ಸಮಾನತೆ, ಪರಸ್ಪರ ಗೌರವ ಮತ್ತು ಸಹಬಾಳ್ವೆಯ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದರು.
ಡಾ. ಮಾಧವ ಗುಡಿ ಮಾತನಾಡಿದರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ನಗರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ರಾಘವರಾವ ಹೊಸೂರು, ಗಿರೀಶ್ ಕುಲಕರ್ಣಿ, ರಘೋತ್ತಮ ಅರ್ಜುಣಗಿ, ಪ್ರಕಾಶ ಅಕ್ಕಲಕೋಟ, ಆನಂದ ಕುಲಕರ್ಣಿ, ಹಿರಿಯ ಪತ್ರಕರ್ತ ಗೋಪಾಲ ನಾಯಕ ಹಾಗೂ ಎಸ್.ಎಸ್. ಬೆಟಗೇರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

