ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸಮಾಜದಲ್ಲಿ ಹಳೆಯ ದ್ವೇಷ, ಮುನಿಸು & ವೈರತ್ವವನ್ನು ಮರೆತು ಪರಸ್ಪರ ಹೊಸ ಸ್ನೇಹ, ಪ್ರೀತಿ & ಗೌರವ ನೀಡುವ ಹಬ್ಬವೇ ವಿಜಯದಶಮಿ ಎಂದು ಪ್ರೊ.ಎಂ.ಎಸ್.ಖೋದನಾಪುರ ಅವರು ಅಭಿಪ್ರಾಯಪಟ್ಟರು.
ಅವರು ನಗರದ ಅಲ್ ಅಮೀನ್ ಆಸ್ಪತ್ರೆ ಎದುರಿಗೆ ಇರುವ ಎನ್.ಜಿ.ಓ. ಕಾಲೋನಿ ಯ ಆಂಜನೇಯ ದೇವಸ್ಥಾನದಲ್ಲಿ ದಿನಾಂಕ: 21.10.2026 ರಂದು ಜರುಗಿದ “ಬನ್ನಿ ವಿನಿಮಯ ಕಾರ್ಯಕ್ರಮ” ದಲ್ಲಿ ಮಾತನಾಡಿದರು.
ಅವರು ಮಾತನಾಡುತ್ತಾ, ಈ ಬನ್ನಿ ವಿನಿಮಯವು ಕೇವಲ ಧಾರ್ಮಿಕ ಆಚರಣೆಯಲ್ಲ. ಸಮಾಜವನ್ನು ಒಗ್ಗೂಡಿಸುವ, ಪ್ರೀತಿ-ಸ್ನೇಹತ್ವವನ್ನು ಹಂಚುವ ಸಾ೦ಸ್ಕೃತಿಕ ಹಬ್ಬವಾಗಿದೆ ಎಂದರು.
ಕಿರಿಯರು ಹಿರಿಯರಿಗೆ ಬನ್ನಿ ಕೊಟ್ಟು ಆಶೀರ್ವಾದ ಪಡೆದರು. ಹಿರಿಯರು ಕಿರಿಯರಿಗೆ ಬನ್ನಿ ಬಂಗಾರ ತಗೊಂಡು ಬಂಗಾರದಂಗ ಬದುಕೋಣ. ಎಲ್ಲರ ಬಾಳು ಬಂಗಾರವಾಗಲಿ ಎಂದು ಹಾರೈಕೆ ನೀಡಿದರು. ಈ ಬನ್ನಿ ವಿನಿಮಯ ಕಾರ್ಯಕ್ರಮದಲ್ಲಿ ನವರಸಪುರದ ವಿವಿಧ ಬಡಾವಣೆಗಳ ಹಿರಿಯರು, ಮಕ್ಕಳು ಮತ್ತು ಮಹಿಳೆಯರು ಸಂಜೆ 6 ಗಂಟೆಗೆ ಆಂಜನೇಯ ದೇವಸ್ಥಾನಕ್ಕೆ ಬನ್ನಿ ವೃಕ್ಷಕ್ಕೆ ಪೂಜೆ ಸಲ್ಲಿಸಿ ಬನ್ನಿ ಮುಡಿದರು. ಈ ಕಾರ್ಯಕ್ರಮ ಜನರಲ್ಲಿ ಮಧುರ ಬಾಂಧವ್ಯ ಬೆಸೆಯುವಲ್ಲಿ ಸಾಕ್ಷಿಯಾಯಿತು.
ಈ ಕಾರ್ಯಕ್ರಮದಲ್ಲಿ ದೇವಸ್ಥಾನದ ಅಧ್ಯಕ್ಷ ಸಂತೋಷ ಪಾಟೀಲ, ಹಿರಿಯರಾದ ಪ್ರೊ. ಮುರುಗೇಶ ಉಕುಮನಾಳಮಠ, ಭೀಮರಾಯ ಬಿರಾದಾರ, ಎಸ.ಜಿ.ನಿಂಗನಗೌಡರ, ಎಸ್. ಎಸ್.ತೆನಿಹಳ್ಳಿ, ಶಿವಾನಂದ ಬಿಜರಗಿ, ನಾನಾಸಾಬ ಕೂಟನೂರ, ಸಿದ್ಧರಾಮ ಹಿರೇಮಠ ಇನ್ನಿತರರು ಉಪಸ್ಥಿತರಿದ್ದರು.

