ಉದಯರಶ್ಮಿ ದಿನಪತ್ರಿಕೆ
ಆಲಮೇಲ: ತಂದೆ ತಾಯಿಗಳಿಗೆ ದ್ರೋಹ ಮಾಡದಂತೆ, ನೋವು ನೀಡದಂತೆ ಇರುತ್ತೇವೆ, ಅವರಿಗೆ ಸಂಕಟ ಬಾರದಂತೆ ನೋಡಿಕೊಂಡು ಹೋಗುತ್ತೇವೆ ಎಂದು ಸಂಕಲ್ಪ ಮಾಡಿ ಎಂದು ಚಿನ್ಮಯಗಿರಿಯ ಮಹಾಂತೇಶ್ವರ ಮಠದ ವೀರಮಹಾಂತ ಶಿವಾಚಾರ್ಯರು ಹೇಳಿದರು.
ಅವರು ತಾಲೂಕಿನ ದೇವಣಗಾಂವ ಗ್ರಾಮದಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ಮಹಾಲಕ್ಷ್ಮಿ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿರುವ ದೇವಿ ಪುರಾಣ ಕಾರ್ಯಕ್ರಮದಲ್ಲಿ ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಹಸ್ರಾರು ಸಂಖ್ಯೆಯಲ್ಲಿ ಮುತ್ತೈದೆಯರು ಉಡಿ ತುಂಬಿಸಿಕೊಂಡು ದೇವಿಯ ಕೃಪೆಗೆ ಪಾತ್ರರಾದರು.
ಪುರಾಣಿಕರಾಗಿ ಆಗಮಿಸಿದ ವೇ. ಮಡಿವಾಳಯ್ಯ ಶಾಸ್ತ್ರಿಗಳು ಗದ್ದಿಗೆಮಠ ಜೇರಟಗಿ, ಸಂಗೀತ ಸೇವೆಯನ್ನು ಯಶವಂತ ಬಡಿಗೇರ ಸಿಂದಗಿ, ತಬಲಾವಾದಕರಾಗಿ ರಾಜಶೇಖರ ಕಟ್ಟಿಸಂಗಾವಿ, ನಂದಿ ಸೇವೆಯನ್ನು ಶರಣಪ್ಪ ಗಂಗನಳ್ಳಿ ಮಾಡಿದರು.

