ವಿಜಯಪುರದಲ್ಲಿ ರಸ್ತೆ ಅಪಘಾತ ಎಂದು ದಾಖಲಾಗಿದ್ದ ಪ್ರಕರಣ `ಕೊಲೆ’ಯಾಗಿ ತಿರುವು
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದಲ್ಲಿ ರಸ್ತೆ ಅಪಘಾತ ಎಂದು ದಾಖಲಾಗಿದ್ದ ಪ್ರಕರಣ ಈಗ ಕೊಲೆ ಎಂಬುದು ಬೆಳಕಿಗೆ ಬಂದಿದ್ದು, ತನ್ನ ಪತಿಯನ್ನೇ ಹತ್ಯೆ ಮಾಡಲು ಪತ್ನಿಯೇ ಸಂಚು ರೂಪಿಸಿದ ಪ್ರಸಂಗ ಹೊರಬಂದಿದೆ.
ಪೊಲೀಸರ ಚಾಣಾಕ್ಷ ತನಿಖೆಯಿಂದ ಈ ಪ್ರಕರಣ ಹೊರಬಂದಿದೆ. ಕಳೆದ ಅ.೪ ರಂದು ರಾಜಶೇಖರ ಬಿರಾದಾರ ಅವರ ರಸ್ತೆ ಅಪಘಾತವಾಗಿತ್ತು. ಜುಮನಾಳ ರಿಂಗ್ ರೋಡ್ ಬಳಿ ವಾಕಿಂಗ್ ಹೋಗುವ ಸಂದರ್ಭದಲ್ಲಿ ವಾಹನ ಡಿಕ್ಕಿಯಾಗಿ ಅವರು ಮೃತಪಟ್ಟಿದ್ದಾರೆ ಎಂದು ಪ್ರಕರಣ ದಾಖಲಾಗಿತ್ತು. ಸಹಜ ಅಫಘಾತವೆಂದೆ ಭಾವಿಸಲಾಗಿತ್ತು. ಆದರೂ ಸಹ ಪೊಲೀಸರಿಗೆ ಈ ಅಪಘಾತ ಸಂಶಯ ಮೂಡಿಸಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದಾಗ ಅನೇಕ ವಿಷಯಗಳು ಬೆಳಕಿಗೆ ಬಂದು ಪೂರ್ವಯೋಜಿತ ಕೊಲೆ ಎಂಬುದು ತನಿಖೆವೇಳೆ ಧೃಡಪಟ್ಟಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆನಂದ ರಾವುತಪ್ಪ ಕಲ್ಲೂರ (೨೫), ಅಶ್ವಿನಿ ರಾಜಶೇಖರ ಬಿರಾದಾರ (೩೦), ಸಚಿನ ಪರಶುರಾಮ ಬಡಳ್ಳಿ ಅವರನ್ನು ಬಂಧಿಸಲಾಗಿದೆ.
ಬೆಳಕಿಗೆ ಬಂದದ್ದು ಹೇಗೆ?
ಪ್ರಕರಣದ ತನಿಖೆ ವೇಳೆ ಅಪಘಾತದ ಕುರಿತು ಅನುಮಾನಗಳು ವ್ಯಕ್ತವಾದ ಹಿನ್ನೆಲೆಯಲ್ಲಿ, ಮುಂದಿನ ತನಿಖೆಯನ್ನು ವಿಜಯಪುರ ನಗರ ಡಿವೈಎಸ್ಪಿ ನಾಗರಾಜ ಜಿ. ಅವರಿಗೆ ವಹಿಸಲಾಗಿತ್ತು. ತನಿಖೆ ಕೈಗೊಂಡ ಅವರು, ಮದೀನಾ ನಗರದ ಪೇಂಟರ್ ಆನಂದ ರಾವುತಪ್ಪ ಕಲ್ಲೂರ (೨೫) ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಪ್ರಕರಣದ ಹಿಂದಿನ ಸಂಚು ಬೆಳಕಿಗೆ ಬಂದಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ವಿವರಿಸಿದರು.
ಸುಮಾರು ೧೦ ವರ್ಷಗಳ ಹಿಂದೆ ಕೊಲೆಗೀಡಾಗಿರುವ ರಾಜಶೇಖರ ಮತ್ತು ಅಶ್ವಿನಿ ವಿವಾಹವಾಗಿದ್ದು, ಅವರಿಗೆ ಆರು ವರ್ಷದ ಅವಳಿ ಗಂಡು ಮಕ್ಕಳು ಜನಿಸಿದ್ದಾರೆ, ಏಳು ತಿಂಗಳ ಹಿಂದೆ ಹೊಸ ಮನೆ ನಿರ್ಮಿಸಿದ್ದ ರಾಜಶೇಖರ ಅವರು, ಮನೆಯ ಪೇಂಟಿಂಗ್ ಕೆಲಸವನ್ನು ಆನಂದ ಕಲ್ಲೂರ ಅವರಿಗೆ ನೀಡಿದ್ದರು. ಈ ಸಂದರ್ಭದಲ್ಲಿ ಅಶ್ವಿನಿ ಮತ್ತು ಆನಂದ ನಡುವೆ ಪರಿಚಯ ಬೆಳೆದು ಸ್ನೇಹವಾಗಿತ್ತು. ಪತಿಯಿಂದ ದೂರವಾಗಲು ಬಯಸಿದ್ದ ಅಶ್ವಿನಿ, ರಾಜಶೇಖರ ಅವರನ್ನು ಕೊಲೆ ಮಾಡುವ ಕುರಿತು ಆನಂದನೊಂದಿಗೆ ಚರ್ಚಿಸಿ ಸಂಚು ರೂಪಿಸಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
`ಕಿಲ್ಲಿಂಗ್’ ಸ್ಕೆಚ್
ಯೋಜನೆಯಂತೆ, ಅ. ೪ರಂದು ಮುಂಜಾನೆ ರಾಜಶೇಖರ ವಾಕಿಂಗ್ಗೆ ತೆರಳಿದ್ದ ಮಾಹಿತಿಯನ್ನು ಅಶ್ವಿನಿ, ಆನಂದನಿಗೆ ನೀಡಿದ್ದಳು. ಆನಂದ ತನ್ನ ಬೈಕ್ನಲ್ಲಿ ರಾಜಶೇಖರ ಅವರನ್ನು ಹಿಂಬಾಲಿಸಿ, ಅವರಿರುವ ಸ್ಥಳದ ಬಗ್ಗೆ ಸಚಿನ ಪರಶುರಾಮ ಬಡಳ್ಳಿ (೨೪) ಹಾಗೂ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನಿಗೆ ಮಾಹಿತಿ ನೀಡಿದ್ದನು. ಬಳಿಕ ಸಚಿನ ಮತ್ತು ಬಾಲಕ ನಂಬರ್ ಪ್ಲೇಟ್ ಇಲ್ಲದ ಕಪ್ಪು ಬಣ್ಣದ ಸ್ಕಾರ್ಪಿಯೋ ವಾಹನದಲ್ಲಿ ಬಂದು, ಜುಮನಾಳ ರಸ್ತೆಯ ಕಿಯಾ ಶೋರೂಂ ಸಮೀಪ ನಡೆದುಕೊಂಡು ಹೋಗುತ್ತಿದ್ದ ರಾಜಶೇಖರ ಅವರಿಗೆ ಹಿಂದಿನಿಂದ ವಾಹನ ಡಿಕ್ಕಿ ಹೊಡೆಸಿ ಕೊಲೆ ಮಾಡಿದ್ದಾರೆ ಎಂಬುದು ತನಿಖೆಯಲ್ಲಿ ಬಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

