ನಾಗನೂರ ಪಿ.ಕೆ. ಸರಕಾರಿ ಶಾಲೆಯ ಶತಮಾನೋತ್ಸವ ಸಂಭ್ರಮಕ್ಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಚಾಲನೆ
ಉದಯರಶ್ಮಿ ದಿನಪತ್ರಿಕೆ
ಅಥಣಿ: ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು. ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗಬಾರದು ಎಂಬ ಉದ್ದೇಶದಿಂದ ಸರಕಾರಿ ಶಾಲೆಗಳ ಅಭಿವೃದ್ಧಿಗೆ ಜನಪ್ರತಿನಿಧಿಗಳು, ರಾಜಕಾರಣಿಗಳು ಹಾಗೂ ಸಮಾಜದ ಗಣ್ಯರು ಕೈಜೋಡಿಸಬೇಕು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಅಥಣಿ ತಾಲೂಕಿನ ನಾಗನೂರ ಪಿ.ಕೆ. ಗ್ರಾಮದ ಉನ್ನತೀಕರಿಸಿದ ಸರಕಾರಿ ಕನ್ನಡ ಹಿರಿಯ ಹಾಗೂ ಪ್ರೌಢಶಾಲೆಯ ಶತಮಾನೋತ್ಸವ ಸಂಭ್ರಮಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಅವರು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವುದು ಸರಕಾರದ ಪ್ರಮುಖ ಆದ್ಯತೆಯಾಗಿದೆ. ರಾಜ್ಯದಲ್ಲಿ ಸುಮಾರು 46 ಸಾವಿರ ಸರಕಾರಿ ಶಾಲೆಗಳಿದ್ದು, 58 ಲಕ್ಷ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ ಸರಕಾರ 44 ಸಾವಿರ ಕೋಟಿ ವೆಚ್ಚ ಮಾಡುತ್ತಿದೆ ಎಂದರು.
ಅಲ್ಲದೆ, 1500 ಶಾಲೆಗಳ ಅಭಿವೃದ್ಧಿಗೆ 4200 ಕೋಟಿ ಅನುದಾನ ಮಂಜೂರು ಮಾಡಲಾಗಿದೆ. ಸರಕಾರಿ ಶಾಲೆಗಳ ಅಭಿವೃದ್ಧಿ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಸರಕಾರ ಜಾರಿಗೆ ತಂದಿರುವ “ನಮ್ಮ ಶಾಲೆ, ನಮ್ಮ ಜವಾಬ್ದಾರಿ” ಯೋಜನೆಯಡಿ ರಾಜಕಾರಣಿಗಳು ಹಾಗೂ ಸಾರ್ವಜನಿಕರು ಶಾಲೆಗಳ ಅಭಿವೃದ್ಧಿಗೆ ನೆರವಾಗಬೇಕು. ನಾನು ಕೂಡ ತಮ್ಮ ತಂದೆ ನೀಡಿದ ಶಾಲೆಯ ಅಭಿವೃದ್ಧಿಗಾಗಿ 10 ಲಕ್ಷ ದೇಣಿಗೆ ನೀಡಿದ್ದೇನೆ ಎಂದು ಹೇಳಿದರು.
ಈ ವೇಳೆ ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಕಾಶಿನಾಥ ಸವದಿ, ಮುಖಂಡರಾದ ಚಿದಾನಂದ ಸವದಿ, ಶಿವಕುಮಾರ ಸವದಿ, ಸಂತೋಷ ಸಾವಡಕರ, ಶಿಕ್ಷಣ ಇಲಾಖೆ ಅಪರ ಆಯುಕ್ತ ಈಶ್ವರ ಉಳ್ಳಾಗಡ್ಡಿ, ಉಪವಿಭಾಗಾಧಿಕಾರಿ ಸುಭಾಷ ಸಂಪಗಾಂವಿ, ಡಿಡಿಪಿಐ ಅಜೀತ ಮನ್ನಿಕೇರಿ, ತಹಸೀಲ್ದಾರ ಸಿದರಾಯ ಭೋಸಗಿ, ಇ ಓ ಶಿವಾನಂದ ಕಲಾರಪೂರ, ಬಿಇಒ ಎಂ ಆರ್ ಮುಂಜಿ, ಡಿವೈಎಸ್ಪಿ ವೀರೇಂದ್ರ ಪಿ. ಸೇರಿದಂತೆ ಶಾಲೆಯ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಗೂ ನಾಗನೂರ ಗ್ರಾಮಸ್ಥರು ಉಪಸ್ಥಿತರಿದ್ದರು.
ಶಿಕ್ಷಣವೇ ಮನುಷ್ಯನನ್ನು ಶ್ರೇಷ್ಠನಾಗಿಸುತ್ತದೆ: ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ
ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿ, ಮನುಷ್ಯನನ್ನು ಶ್ರೇಷ್ಠನನ್ನಾಗಿ ಮಾಡುವ ಶಕ್ತಿ ಶಿಕ್ಷಣಕ್ಕಿದೆ. ಜೀವ ವಿಕಾಸದಲ್ಲಿ ಮನುಷ್ಯನಿಗೆ ಇತರ ಜೀವಿಗಳಂತೆ ಅಪಾರ ದೈಹಿಕ ಶಕ್ತಿ, ವೇಗ ಅಥವಾ ಆಕರ್ಷಕ ಬಣ್ಣಗಳಿಲ್ಲ. ಆದರೆ ಬುದ್ಧಿವಂತಿಕೆ ಮತ್ತು ಆ ಬುದ್ಧಿಗೆ ಬೆಳಕು ನೀಡುವ ಶಿಕ್ಷಣದ ಮೂಲಕ ಮನುಷ್ಯ ಇತರ ಜೀವಿಗಳಿಗಿಂತ ವಿಶಿಷ್ಟನಾಗಿದ್ದಾನೆ. ಜೀವನದಲ್ಲಿ ಸಂಕಷ್ಟಗಳು ಎದುರಾದಾಗ, ನಮ್ಮವರು ದೂರವಾದಾಗ ಹಾಗೂ ಕತ್ತಲೆಯ ಹಾದಿಯಲ್ಲಿ ಸಾಗಬೇಕಾದಾಗ ಮನುಷ್ಯನೊಳಗಿನ ಜ್ಞಾನವೇ ದಾರಿದೀಪವಾಗುತ್ತದೆ. ಆದ್ದರಿಂದ ಶಿಕ್ಷಣವೆಂಬುದು ಕೇವಲ ನಾಲ್ಕು ಗೋಡೆಗಳ ನಡುವೆ ಕಲಿಯುವ ಪಾಠವಲ್ಲ, ಅದು ಬದುಕನ್ನು ಅರ್ಥಮಾಡಿಕೊಳ್ಳುವ, ಸವಾಲುಗಳನ್ನು ಎದುರಿಸುವ ಮತ್ತು ಸಮಾಜಕ್ಕೆ ಕೊಡುಗೆ ನೀಡುವ ಶಕ್ತಿಯಾಗಿದೆ ಎಂದರು.

