ಧರ್ಮವಿಜಯದ ದಸರಾ ಹೊರಗೆ ಹಬ್ಬದ ಸಂಭ್ರಮ; ಒಳಗೆ ಒಳ್ಳೆಯತನದ ಬೆಳಕು
– ಸಿದ್ಧಲಿಂಗ ಚೌಧರಿ.
ಶಿಕ್ಷಕರು, ಸಿಂದಗಿ
ವಿಜಯಪುರ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ದಸರಾ ಬಂತೆಂದರೆ ಹಳ್ಳಿ ಮನೆಗಳಲ್ಲಿ ಸಂಭ್ರಮವೋ ಸಂಭ್ರಮ. ಮನೆ ಸ್ವಚ್ಛಗೊಳಿಸಿ, ಬಾಗಿಲಿಗೆ ತೋರಣ ಕಟ್ಟಿ, ದೇವರ ಮುಂದೆ ದೀಪ ಹಚ್ಚಿ, ಭಕ್ತಿಯಿಂದ ಕೈಮುಗಿಯುವ ಹಬ್ಬವಿದು. ದುಡಿಮೆಗೆ ನೆರವಾದ ನೇಗಿಲು, ಕುಡಗೋಲು, ಕೃಷಿ ಉಪಕರಣಗಳಿಗೆ ಪೂಜೆ ಸಲ್ಲಿಸಿ ಕೃತಜ್ಞತೆ ತೋರುವ ಸಂದರ್ಭವೂ ಹೌದು. ಬನ್ನಿ ಎಲೆ ಹಂಚಿಕೊಂಡು, ಹಿರಿಯರ ಕಾಲಿಗೆ ನಮಸ್ಕರಿಸಿ, ಆಶೀರ್ವಾದ ಪಡೆಯುವ ಈ ಹಬ್ಬ ನಮ್ಮ ಬದುಕಿನ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ.
ನಮ್ಮ ಸಂಸ್ಕೃತಿಯಲ್ಲಿ ಒಂಬತ್ತು ಸಂಖ್ಯೆಗೆ ವಿಶೇಷ ಸ್ಥಾನವಿದೆ. ನವರಾತ್ರಿ, ನವಗ್ರಹ, ನವರಸ, ನವರತ್ನಗಳ ಪರಿಕಲ್ಪನೆಗಳಲ್ಲಿ ಇದನ್ನು ಕಾಣುತ್ತೇವೆ. ದೇವರ ಮಹಿಮೆ ಕೇಳುವುದು, ಕೀರ್ತನೆ ಹಾಡುವುದು, ಸ್ಮರಿಸುವುದು, ಸೇವೆ ಸಲ್ಲಿಸುವುದು ಸೇರಿದಂತೆ ನವವಿಧ ಭಕ್ತಿಮಾರ್ಗಗಳಿವೆ. ಇವೆಲ್ಲದರ ಆಶಯ ಮನಸ್ಸನ್ನು ಒಳ್ಳೆಯ ದಾರಿಗೆ ತರುವುದೇ ಆಗಿದೆ.
ನವರಾತ್ರಿಯ ಒಂಬತ್ತು ದಿನ ಮಹಾಕಾಳಿ, ಮಹಾಲಕ್ಷ್ಮಿ, ಮಹಾಸರಸ್ವತಿಯರನ್ನು ಭಕ್ತಿಯಿಂದ ಆರಾಧಿಸಲಾಗುತ್ತದೆ. ಮನೆಗಳಲ್ಲೂ ದೇವಾಲಯಗಳಲ್ಲೂ ಪೂಜೆ, ದೀಪಾರಾಧನೆ, ಪುರಾಣ ಪ್ರವಚನಗಳು ನಡೆಯುತ್ತವೆ. ಊರಿಂದ ಊರಿಗೆ ಆಚರಣೆಯ ರೀತಿ ಬೇರೆಯಾದರೂ, ಕೆಡುಕನ್ನು ತೊರೆದು ಒಳಿತನ್ನು ಬೆಳೆಸಬೇಕೆಂಬ ಸಂದೇಶ ಎಲ್ಲೆಡೆಯೂ ಒಂದೇ.
ದುರ್ಗಾದೇವಿ ಮಹಿಷಾಸುರನನ್ನು ಸಂಹರಿಸಿದ ಕಥೆಯನ್ನು ಕೇಳಿ ಸಂತಸಪಡುವ ನಾವು, ನಮ್ಮೊಳಗಿನ ಕೆಟ್ಟ ಗುಣಗಳನ್ನೂ ಒಮ್ಮೆ ನೋಡಿಕೊಳ್ಳಬೇಕು. ಕಾಮ, ಕ್ರೋಧ, ಮೋಹ, ಲೋಭ, ಮದ, ಮತ್ಸರ, ಡಾಂಭಿಕತನ, ಅಸತ್ಯ ಮತ್ತು ಕ್ರೌರ್ಯಗಳು ಮನುಷ್ಯನ ನೆಮ್ಮದಿಯನ್ನು ಕಸಿದುಕೊಳ್ಳುತ್ತವೆ. ಹೊಲದಲ್ಲಿ ಕಳೆ ಬೆಳೆದರೆ ಬೆಳೆ ಸೊರಗುವಂತೆ, ಮನಸ್ಸಿನಲ್ಲಿ ಕೆಟ್ಟ ಗುಣಗಳು ಬೆಳೆದರೆ ಒಳ್ಳೆಯತನ ಸೊರಗುತ್ತದೆ. ಹೊಲದ ಕಳೆ ಕೀಳುವಷ್ಟೇ ಕಾಳಜಿಯಿಂದ ಮನದ ಕಳೆಯನ್ನೂ ಕೀಳಬೇಕು.

ಪೂಜೆ, ಉಪವಾಸ, ವ್ರತ, ಸತ್ಕಥೆಗಳ ಶ್ರವಣ ನಮ್ಮ ನಡೆನುಡಿಯನ್ನು ತಿದ್ದಿಕೊಳ್ಳಲು ನೆರವಾಗಬೇಕು. ಹಸಿದವರಿಗೆ ಅನ್ನ ಕೊಡುವುದು, ಕಷ್ಟದಲ್ಲಿದ್ದವರಿಗೆ ನೆರವಾಗುವುದು, ನೆರೆಹೊರೆಯವರೊಂದಿಗೆ ಪ್ರೀತಿಯಿಂದ ಬಾಳುವುದು ಹಬ್ಬಕ್ಕೆ ಮತ್ತಷ್ಟು ಅರ್ಥ ತರುತ್ತವೆ. ಬನ್ನಿ ಎಲೆಯನ್ನು ಬಂಗಾರವೆಂದು ಹಂಚುವ ಕೈಗಳು, ಒಡೆದ ಮನಸ್ಸುಗಳನ್ನು ಬೆಸೆಯುವ ಕೆಲಸವನ್ನೂ ಮಾಡಲಿ. ಹಳೆಯ ದ್ವೇಷ ಮರೆತು ಹೊಸ ಸ್ನೇಹ ಬೆಳೆಸೋಣ.
ನವರಾತ್ರಿಯ ಸಂಭ್ರಮಕ್ಕೆ ಪೂರ್ಣತೆ ತರುವ ವಿಜಯದಶಮಿ ಹೊಸ ಕೆಲಸಗಳಿಗೆ ಶುಭಾರಂಭ ಮಾಡುವ ದಿನವೆಂದು ಪರಿಗಣಿಸಲಾಗುತ್ತದೆ. ವಿದ್ಯಾರಂಭ, ಪುಸ್ತಕ ಪೂಜೆ, ಆಯುಧಪೂಜೆ, ಶಮೀಪೂಜೆಯ ಆಚರಣೆಗಳು ಜ್ಞಾನ, ದುಡಿಮೆ ಮತ್ತು ಪ್ರಕೃತಿಯ ಬಗ್ಗೆ ಗೌರವವನ್ನು ಕಲಿಸುತ್ತವೆ.
ಈ ದಸರಾ ಪ್ರತಿಯೊಂದು ಮನೆಯಲ್ಲೂ ಆರೋಗ್ಯ, ಸುಖ, ಶಾಂತಿ ಮತ್ತು ನೆಮ್ಮದಿ ತರಲಿ. ರೈತನ ಹೊಲದಲ್ಲಿ ಸಮೃದ್ಧ ಬೆಳೆ ಬೆಳೆಯಲಿ; ಮಕ್ಕಳ ಮನದಲ್ಲಿ ವಿದ್ಯೆಯ ಬೆಳಕು ಮೂಡಲಿ. ನಮ್ಮೊಳಗಿನ ಕೆಡುಕು ಸೋತು, ಒಳ್ಳೆಯತನ ಗೆಲ್ಲಲಿ. ಅದೇ ಧರ್ಮವಿಜಯದ ದಸರಾದ ಸಾರ್ಥಕತೆ.


