ಪಡಿತರ ಧಾನ್ಯಗಳ ಅಕ್ರಮ ತಡೆಗೆ ಜಿಲ್ಲಾಡಳಿತದಿಂದ ಕ್ರಮ | ೪೫ ಪ್ರಕರಣ ದಾಖಲು
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ವಿತರಿಸುವ ಪಡಿತರ ಧಾನ್ಯಗಳ ಅಕ್ರಮ ಸಾಗಣೆ, ಸಂಗ್ರಹಣೆ ಹಾಗೂ ದುರುಪಯೋಗ ತಡೆಗಟ್ಟುವ ನಿಟ್ಟಿನಲ್ಲಿ ವಿಜಯಪುರ ಜಿಲ್ಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಜನವರಿ ೨೦೨೬ರಿಂದ ಅಕ್ಟೋಬರ್ ೨೦೨೬ರವರೆಗೆ ಒಟ್ಟು ೪೫ ಪ್ರಕರಣಗಳನ್ನು ದಾಖಲಿಸಿ, ೩,೮೯೪.೧೩ ಕ್ವಿಂಟಲ್ ಪಡಿತರ ಅಕ್ಕಿ ಹಾಗೂ ೯೫.೧ ಕ್ವಿಂಟಲ್ ಗೋಧಿ ವಶಪಡಿಸಿಕೊಳ್ಳಲಾಗಿದೆ.
ವಶಪಡಿಸಿಕೊಂಡ ಪಡಿತರ ಅಕ್ಕಿಯ ಅಂದಾಜು ಮೌಲ್ಯ ₹೯೩,೯೧,೧೦೪ ಹಾಗೂ ಗೋಧಿಯ ಮೌಲ್ಯ ₹೨,೪೨,೫೦೫ ಆಗಿದೆ. ಪಡಿತರ ಧಾನ್ಯಗಳ ಅಕ್ರಮ ಸಾಗಣೆ ಮತ್ತು ದುರುಪಯೋಗಕ್ಕೆ ಸಂಬAಧಿಸಿದAತೆ ಅಗತ್ಯ ವಸ್ತುಗಳ ಕಾಯ್ದೆ-೧೯೫೫ರ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಅಕ್ರಮ ಸಾಗಣೆ ಹಾಗೂ ಮಾರಾಟಕ್ಕೆ ಬಳಸುತ್ತಿದ್ದ ಲಾರಿಗಳು, ಟ್ರಕ್ಗಳು, ಟಾಟಾ ಏಸ್, ಬಜಾಜ್ ಮ್ಯಾಕ್ಸಿಮೊ ಸೇರಿದಂತೆ ವಿವಿಧ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅವುಗಳ ಒಟ್ಟು ಅಂದಾಜು ಮೌಲ್ಯ ₹೨.೧೦ ಕೋಟಿ ಎಂದು ತಿಳಿಸಿದ್ದಾರೆ.
ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಅರ್ಹ ಫಲಾನುಭವಿಗಳಿಗೆ ತಲುಪಬೇಕಾದ ಪಡಿತರ ಧಾನ್ಯಗಳನ್ನು ಅಕ್ರಮವಾಗಿ ಸಂಗ್ರಹಿಸುವುದು, ಸಾಗಣೆ ಮಾಡುವುದು ಅಥವಾ ಕಾಳಸಂತೆಯಲ್ಲಿ ಮಾರಾಟ ಮಾಡುವುದು ಕಾನೂನುಬಾಹಿರವಾಗಿದೆ. ಇಂತಹ ಚಟುವಟಿಕೆಗಳಲ್ಲಿ ತೊಡಗುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಪಡಿತರ ಧಾನ್ಯಗಳ ಅಕ್ರಮ ಮಾರಾಟ ಅಥವಾ ಸಾಗಣೆ ಕಂಡುಬಂದಲ್ಲಿ ಸಾರ್ವಜನಿಕರು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಅಕ್ರಮ ತಡೆಗೆ ಸಹಕರಿಸಬೇಕು ಎಂದು ಆಹಾರ ಇಲಾಖೆಯ ಉಪನಿರ್ದೇಶಕ ವಿನಯಕುಮಾರ ಪಾಟೀಲ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
