ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ಪಟ್ಟಣದ ಸಂಜೀವನಗರ ಬಡಾವಣೆಯ ಶ್ರೀನಿಧಿ ಕಾಲೋನಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶ್ರೀ ಮಹಾಲಕ್ಷ್ಮೀ ದೇವಿ ಮಂದಿರದ ಲೋಕಾರ್ಪಣೆ ಹಾಗೂ ಮೂರ್ತಿ ಪ್ರತಿಷ್ಠಾಪನಾ ಮಹೋತ್ಸವದ ನಿಮಿತ್ತ ಶುಕ್ರವಾರ ಅತ್ಯಂತ ಭಕ್ತಿ ಶ್ರದ್ಧೆ ಮತ್ತು ಶಾಸ್ತ್ರೋಕ್ತ ವೈದಿಕ ವಿಧಿ ವಿಧಾನಗಳೊಂದಿಗೆ ಶ್ರೀ ಮಹಾಲಕ್ಷ್ಮಿ ದೇವಿಯ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯು ಸಂಭ್ರಮದಿಂದ ನೆರವೇರಿತು.
ನೂತನ ದೇವಸ್ಥಾನದಲ್ಲಿ ಪ್ರತಿಷ್ಠಾಪನಾ ಮಹೋತ್ಸವದ ಅಂಗವಾಗಿ ಬೆಳಿಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಚಾಲನೆ ಪಡೆದವು. ಗಣಪತಿ ಪೂಜೆ ಹಾಗೂ ಪುಣ್ಯಾಹವಾಚನದೊಂದಿಗೆ ಧಾರ್ಮಿಕ ವಿಧಿವಿಧಾನಗಳು ಆರಂಭಗೊಂಡವು. ನಂತರ ನವಗ್ರಹ ಹೋಮ, ವಾಸ್ತು ಹೋಮ, ಹಾಗೂ ಮಹಾಲಕ್ಷ್ಮೀ ಹೋಮಗಳನ್ನು ಸಂಕಲ್ಪ ಪೂರ್ವ ನೆರವೇರಿಸಲಾಯಿತು.
ದೇವಿ ಮೂರ್ತಿಗೆ ಜಲಧಿವಾಸ, ಕ್ಷೀರಧಿವಾಸ, ಮತ್ತು ಧಾನ್ಯಧಿವಾಸ ಪೂಜೆಗಳನ್ನು ಪೂರೈಸಿ, ದೇವಿಗೆ ಪವಿತ್ರ ಜಲದಿಂದ ಮಜ್ಜನ ಸೇವೆಯನ್ನು ನಡೆಸಲಾಯಿತು.
ಮಧ್ಯಾಹ್ನ 12:30 ಗಂಟೆಗೆ ಸೌಮ್ಯ ಮುಹೂರ್ತದಲ್ಲಿ ವೇದಮಂತ್ರ ಘೋಷಗಳು ಹಾಗೂ ಮಂಗಳವಾದ್ಯಗಳೊಂದಿಗೆ ಶಾಸ್ತ್ರೋಕ್ತವಾಗಿ ಶ್ರೀ ಮಹಾಲಕ್ಷ್ಮಿ ದೇವಿಯ ಪ್ರಾಣ ಪ್ರತಿಷ್ಠಾಪನೆ ಮತ್ತು ಮಹಾಮಂಗಳಾರತಿ ನೆರವೇರಿತು.
ಧಾರ್ಮಿಕ ಮಹತ್ಕಾರ್ಯದಲ್ಲಿ ಮಾಗಣಗೇರಿಯ ಬ್ರಹನ್ಮಠದ ಡಾ.ವಿಶ್ವರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯ ಹಾಗೂ ಅಮೃತ ಹಸ್ತದಿಂದ ದೇವಿ ಪ್ರಾಣ ಪ್ರತಿಷ್ಠಾಪನೆ ಜರುಗಿತು. ವೇದಮೂರ್ತಿಗಳಾದ ಏಳಗಿಯ ಶರಣಯ್ಯ ಶಾಸ್ತ್ರಿಗಳು, ರಾಯಚೂರಿನ ವೀರಭದ್ರಯ್ಯ ಶಾಸ್ತ್ರಿಗಳು, ಮಾಗಣಗೇರಿಯ ಚನ್ನಬಸಯ್ಯ ಶಾಸ್ತ್ರಿಗಳು ಹಾಗೂ ಹೊಸಕೇರಿಯ ಪ್ರಶಾಂತ ಶಾಸ್ತ್ರಿಗಳು ಅತ್ಯಂತ ನಿಷ್ಠೆಯಿಂದ ಹಾಗೂ ಶಾಸ್ತ್ರಬದ್ಧವಾಗಿ ಪೌರೋಹಿತ್ಯ ನೆರವೇರಿಸಿದರು.
ಭವ್ಯ ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ನೂರಾರು ಭಕ್ತಾದಿಗಳು, ದಂಪತಿ ಸಮೇತರಾಗಿ ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿ ತಾಯಿಯ ಕೃಪೆಗೆ ಪಾತ್ರರಾದರು.
ಪ್ರತಿಷ್ಠಾಪನಾ ಮಹೋತ್ಸವದ ನಂತರ ಆಗಮಿಸಿದ ಎಲ್ಲ ಭಕ್ತರಿಗೆ ತೀರ್ಥ ಪ್ರಸಾದ ಹಾಗೂ ಮಹಾಸಂತರ್ಪಣೆಯ ವ್ಯವಸ್ಥೆಯನ್ನು ಮಾಡಲಾಗಿತ್ತು.

