ವಿಜಯಪುರದಲ್ಲಿ ಸಂಸದ ರಮೇಶ ಜಿಗಜಿಣಗಿ ಅವರಿಂದ ಪತ್ರಿಕಾಗೋಷ್ಠಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿರುವ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರುವುದಕ್ಕೆ ನಿಮಗೇನು ತೊಂದರೆ? ಕೇವಲ ದಲಿತ ಬಾಂಧವರ ಬಗ್ಗೆ ನಿಮ್ಮ ಮೊಸಳೆ ಕಣ್ಣೀರು ಸಾಕು ಎಂದು ಸಂಸದ ರಮೇಶ ಜಿಗಜಿಣಗಿ ಖಾರವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಟೀಕೆಗಳ ಸುರಿಮಳೈಗೈದರು.
ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಸಮರ್ಥವಾಗಿ ವಾದ ಮಂಡಿಸಿ ಹೈಕೋಟ್ಗೆ ಮೀಸಲಾತಿ ಪ್ರಮಾಣ ಏರಿಕೆಯ ವಿಷಯವನ್ನು ಮನವರಿಕೆ ಮಾಡಿಕೊಡುವಲ್ಲಿ ಸಂಪೂರ್ಣ ವಿಫಲವಾಗಿದೆ, ಈಗ ಅದನ್ನು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಲು ವಿಳಂಬ ಮಾಡುತ್ತದೆ, ಅಲ್ಲಿಯೂ ಇದೇ ರೀತಿ ತನ್ನ ಛಾಳಿ ಮುಂದುವರೆಸಿ ಪರಿಶಿಷ್ಟ ಜಾತಿಯವರನ್ನು ಯಾಮಾರಿಸುವುದನ್ನು ಬಿಡಬೇಕು ಎಂದು ಜಿಗಜಿಣಗಿ ಗುಡುಗಿದ್ದಾರೆ.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣ ಹೆಚ್ಚಿಸಿರುವ ಈ ಹಿಂದಿನ ಬಿಜೆಪಿ ಸರ್ಕಾರದ ಕ್ರಮ ಅಸಾಂವಿಧಾನಿಕ ಎಂದು ಆದೇಶಿಸಿರುವ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ದಲಿತ ಪರವಾದ ತನ್ನ ಬದ್ಧತೆ ಹಾಗೂ ನಿಲುವು ಸಾಬೀತುಪಡಿಸಲಿ ಎಂದು ಸವಾಲು ಹಾಕಿದರು.
ಈ ಹಿಂದೆ ೨೦೨೨ರಲ್ಲಿ ಬಿಜೆಪಿ ಸರ್ಕಾರ ವಿಶೇಷ ಕಾಯ್ದೆಯ ಮೂಲಕ ಪರಿಶಿಷ್ಟ ಜಾತಿ (ಎಸ್ಸಿ) ಮೀಸಲಾತಿಯನ್ನು ಶೇ. ೧೫ ರಿಂದ ಶೇ. ೧೭ಕ್ಕೆ ಹಾಗೂ ಪರಿಶಿಷ್ಟ ಪಂಗಡ (ಎಸ್ಟಿ) ಮೀಸಲಾತಿಯನ್ನು ಶೇ. ೩ ರಿಂದ ಶೇ. ೭ಕ್ಕೆ ಹೆಚ್ಚಿಸಿ ತನ್ನ ಬದ್ಧತೆ ಮತ್ತು ಕಾಳಜಿಯನ್ನು ಪ್ರದರ್ಶಿಸಿತ್ತು. ಆದರೆ, ಅದನ್ನು ಖಂಡಿಸಿ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಪೂರಕವಾಗಿ ಪ್ರಕರಣ ಮುನ್ನಡೆಸುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ಪರಿಣಾಮ ಹೈಕೋರ್ಟ್ ಈ ಕ್ರಮ ಅಸಂವಿಧಾನಿಕ ಎಂದು ಘೋಷಿಸಿ ಈ ಹೆಚ್ಚಳದ ಆದೇಶ ರದ್ದುಗೊಳಿಸಿದೆ. ಇದಕ್ಕೆ ಕಾಂಗ್ರೆಸ್ ಪಕ್ಷದ ಅಸಮರ್ಪಕ, ಅವೈಜ್ಞಾನಿಕ ಹಾಗೂ ತಾತ್ಸಾರ ಮತ್ತು ನಿರ್ಲಕ್ಷಿತ ಧೋರಣೆಯೇ ಕಾರಣ ಎಂದು ಜಿಗಜಿಣಗಿ ದೂರಿದರು.
ಬೆಳಿಗ್ಗೆ ದಲಿತ, ಮಧ್ಯಾಹ್ನ ಅಲ್ಪಸಂಖ್ಯಾತ, ಸಂಜೆ ಹಿಂದುಳಿದ ವರ್ಗ (ಬಾಕ್ಸ್)
ಬಿಜೆಪಿಯ ಈ ನಿರ್ಧಾರ ಅಸಾಂವಿಧಾನಿಕ ಎನ್ನುವವರು ಇತರೆ ರಾಜ್ಯಗಳಲ್ಲಿ ಈಗಾಗಲೇ ಮೀಸಲಾತಿ ಪ್ರಮಾಣವನ್ನು ಶೇ.೫೦ಕ್ಕಿಂತ ಹೆಚ್ಚಿಸಿರುವುದನ್ನು ಮನಗಾಣಬೇಕು. ತಮಿಳುನಾಡು ಸೇರಿ ವಿವಿಧ ರಾಜ್ಯಗಳಲ್ಲಿ ಮೀಸಲಾತಿಯ ಗಡಿ ಶೇ.೫೦ ದಾಟಿದೆ. ಈ ವಿಷಯವನ್ನು ನ್ಯಾಯಾಲಯಕ್ಕೆ ಕಾಂಗ್ರೆಸ್ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಲಿಲ್ಲ ಎಂದರು. ಮಾತೆತ್ತಿದರೆ ಕಾಂಗ್ರೆಸ್ನವರು ದಲಿತ ಪರ ಎಂದು ಭಾಷಣ ಬಿಗಿಯುತ್ತಾರೆ. ಮುಂಜಾನೆ ದಲಿತ, ಮಧ್ಯಾಹ್ನ ಅಲ್ಪಸಂಖ್ಯಾತ, ಸಂಜೆ ಹಿಂದುಳಿದ ವರ್ಗ ಎಂದು ಭಾಷಣ ಬಿಗಿಯುವ ಕಾಂಗ್ರೆಸ್ಸಿಗರು ಇದೀಗ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಬೇಕಲ್ಲವೇ ಎಂದು ಜಿಗಜಿಣಗಿ ಗುಡುಗಿದರು.

