-ಆಶಾ ಅಡೂರ್.ಕಡಿರುದ್ಯಾವರದಕ್ಷಿಣ ಕನ್ನಡ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ದಸರಾ ಕೇವಲ ಒಂದು ಹಬ್ಬವಲ್ಲ ಇದು ಭಾರತೀಯ ಸಂಸ್ಕೃತಿಯ ಪ್ರತಿಕ ಶಕ್ತಿ ಆರಾಧನೆ ಹಾಗೂ ವಿಜಯದ ಸಂಕೇತ ಪ್ರತಿಯೊಂದು ಹಬ್ಬದ ಹಿಂದೆ ಅದರದ್ದೇ ಆದ ಒಂದು ಪೌರಾಣಿಕ ಹಿನ್ನೆಲೆ ಸಾಂಸ್ಕೃತಿಕ ಪರಂಪರೆ ಹಾಗೂ ಜೀವನ ಸಂದೇಶವನ್ನು ಹೊಂದಿದೆ ಈ ನಿಟ್ಟಿನಲ್ಲಿ ದಸರ ಹಬ್ಬ ಹತ್ತು ಹಲವಾರು ವಿಶೇಷತೆಗಳನ್ನು ಒಳಗೊಂಡಿದೆ.
ದಸರಾ ಎಂದಕ್ಷಣ ನವರಾತ್ರಿಯ ಒಂಭತ್ತು ದಿನಗಳ ಉತ್ಸವದಲ್ಲಿ ಒಂಭತ್ತು ದೇವಿಯರ ಆರಾಧನೆ, ಸಾಂಸ್ಕೃತಿಕ ಕಾರ್ಯಕ್ರಮ, ವರ್ಣರಂಜಿತ ದೀಪಾಲಂಕಾರ, ವಿಜಯದಶಮಿ ವೈಭವ, ಭಜನೆ, ಪೂಜೆ ಹಾಗೂ ಎಲ್ಲೆಡೆ ಭಕ್ತಿ ಭಾವದ ಸಂಚಲನ ಕಣ್ಣ ಮುಂದೆ ಬರುತ್ತದೆ. ಈ ಹಬ್ಬದ ನಿಜವಾದ ಅರ್ಥವೇ ಶಕ್ತಿಯ ಆರಾಧನೆಯಿಂದ ಮನಸ್ಸನ್ನು ಶುದ್ಧಿಗೊಳಿಸುವುದು.
ನವರಾತ್ರಿ ಹಿನ್ನಲೆ
ಹಿಂದೂ ಪುರಾಣದ ಪ್ರಕಾರ ಮಹಿಷಾಸುರನೆಂಬ ರಾಕ್ಷಸನು ಘೋರ ತಪಸ್ಸನ್ನು ಮಾಡಿ ಬ್ರಹ್ಮದೇವನಿಂದ ಯಾವುದೇ ಪುರುಷನಾಗಲಿ, ಪ್ರಾಣಿಗಳಿಂದಾಗಲಿ, ದೇವತೆಗಳಿಂದಾಗಲಿ ಸಾವು ಬಾರದೆನ್ನುವ ವರವನ್ನು ಪಡೆದನು. ಹೆಣ್ಣು ಮಕ್ಕಳು ಅಬಲೆಯರು ಅವರಿಂದ ಏನು ಮಾಡಲು ಸಾಧ್ಯವಿಲ್ಲ ಹಾಗಾಗಿ ಪ್ರಾಣಕ್ಕೆ ಆಪತ್ತು ಬಾರದು ಎನ್ನುವ ಅಹಂಕಾರದಿಂದ ದೇವತೆಗಳನ್ನು ಸೋಲಿಸಿ ಮೂರು ಲೋಕದಲ್ಲಿ ಕ್ರೌರ್ಯವನ್ನು ಮೆರೆದಿದ್ದನು. ಆಗ ಎಲ್ಲಾ ದೇವತೆಗಳು ತಮ್ಮ ದಿವ್ಯ ಶಕ್ತಿ ಮತ್ತು ತೇಜಸ್ಸಿನ ಪ್ರಭಾವದಿಂದ ದುರ್ಗಾದೇವಿಯ ಅವತಾರ ವಾಯಿತು. ಎಲ್ಲಾ ದೇವತೆಗಳು ತಮ್ಮ ಆಯುಧಗಳನ್ನು ದೇವಿಗೆ ಹಸ್ತಾoತರಿಸಿ ಯುದ್ಧಕ್ಕೆ ಸಿದ್ಧಗೊಳಿಸಿದರು. ದೇವಿಯು ಸಿಂಹವಾಹಿನಿಯಾಗಿ 9 ದಿನಗಳ ಕಾಲ ಯುದ್ಧ ಮಾಡಿ ಹತ್ತನೆಯ ದಿನದಂದು ಮಹಿಷಾಸುರನನ್ನು ಸಂಹರಿಸಿದಳು. ಆ ಪುಣ್ಯದಿನವನ್ನು ವಿಜಯದಶಮಿಯ ದಿನವಾಗಿ ಆಚರಿಸಲಾಗುತ್ತಿದೆ.
ಅಯೋಧ್ಯೆಯ ರಾಜನಾದ ಶ್ರೀ ರಾಮನು ಸೀತಾ ಮಾತೆಯ ಅಪಹರಣದ ಹಿನ್ನೆಲೆಯಲ್ಲಿ ನಂಕಾಧಿಪತಿ ರಾವಣನನ್ನು ವದಿಸಲು ನವರಾತ್ರಿಯ 9 ದಿನಗಳ ಕಾಲ ತಾಯಿ ತುರ್ಕೆಯನ್ನು ಆರಾಧಿಸಿ ನಂತರ ಹತ್ತನೆಯ ದಿನದಂದು ರಾವಣನನ್ನು ರಾವಣನನ್ನು ದೇವಿಯ ಅನುಗ್ರಹದಿಂದ ಸಂಹರಿಸಿದನು. ಹಾಗಾಗಿ ಉತ್ತರ ಭಾರತದಲ್ಲಿ ವಿಜಯ ದಶಮಿ ದಿನದಂದು ರಾವಣ ಪ್ರತಿಕೃತಿಯನ್ನು ಸುಡುವ ಪದ್ಧತಿ ಇದೆ.

ಮಹಾಭಾರತದ ಪ್ರಕಾರ ಪಾಂಡವರು ತಮ್ಮ ಆಜ್ಞಾತವಾಸದ ಸಂದರ್ಭದಲ್ಲಿ ತಮ್ಮ ಆಯುಧಗಳನ್ನು ಶಮಿ ಮರದ ಮೇಲೆ ಬಚ್ಚಿಟ್ಟಿದ್ದರು. ಹದಿಮೂರು ವರ್ಷದ ಆಜ್ಞಾತವಾಸ ಮುಗಿದ ನಂತರ ವಿಜಯ ದಶಮಿಯಂದು ಆಯುಧಗಳನ್ನು ಮರದಿಂದ ಹೊರಗೆ ತೆಗೆದು ಅದನ್ನು ಭಕ್ತಿಯಿಂದ ಪೂಜಿಸಿ ವಿಜಯವನ್ನು ಸಾಧಿಸಿದರು.
ಶಕ್ತಿಯ ಆರಾಧನೆ

ನವರಾತ್ರಿಯ 9 ದಿನಗಳು ದೇವಿಯ ವಿವಿಧ ರೂಪಗಳನ್ನು ಆರಾಧಿಸಲಾಗುತ್ತದೆ. ಈ ಆಚರಣೆಯು ಧಾರ್ಮಿಕ ಆಚರಣೆ ಮಾತ್ರವಲ್ಲ, ನಮ್ಮೊಳಗಿನ ದುರ್ಗುಣಗಳನ್ನು ತೊರೆದು ಶಕ್ತಿಯನ್ನು ಜಾಗೃತಗೊಳಿಸುವ ಪರ್ವಕಾಲ. ಅಧರ್ಮಗಳ ಅಧರ್ಮ ಅಧರ್ಮವು ಎಷ್ಟೇ ಅಧಿಪತ್ಯ ಸಾಧಿಸಿದರು ಧರ್ಮ ಹಾಗೂ ಸತ್ಯದ ಮುಂದೆ ಅದು ಎಂದಿಗೂ ಸೋಲಲೇಬೇಕು ಎನ್ನುವ ಮಹತ್ವವಾದ ಸಂದೇಶವನ್ನು ದಸರಾ ಹಬ್ಬ ಸೂಚಿಸುತ್ತದೆ. ವಾಸ್ತವವಾಗಿ ಈ ಹಬ್ಬವು ಸ್ತ್ರೀ ಶಕ್ತಿಯ ಮಹತ್ವವನ್ನು ನೆನಪಿಸುತ್ತದೆ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಶಿಕ್ಷಣ,ಕಲೆ, ವಿಜ್ಞಾನ ಸೇರಿದಂತೆ ಎಲ್ಲ ಕ್ಷೇತ್ರದಲ್ಲೂ ಸಾಧನೆ ಮಾಡುತ್ತಾ ಶಕ್ತಿಯ ರೂಪವಾಗಿ ಕಾಣುತ್ತಾಳೆ ಅದೇ ರೀತಿ ಮನೆಯಲ್ಲಿರುವ ತಾಯಿ, ಅಕ್ಕ,ತಂಗಿ, ಹೆಂಡತಿ, ಮಗಳು ಎಲ್ಲರೂ ಶಕ್ತಿಯ ಪ್ರತಿರೂಪವೇ ಆಗಿರುತ್ತಾರೆ. ಅವರನ್ನು ಗೌರವಿಸುವುದು ಹಾಗೆಯೇ ಸುತ್ತಮುತ್ತಲಿನ ಹೆಣ್ಣಿನ ಶಕ್ತಿಯನ್ನು ಗುರುತಿಸಿ ಗೌರವಿಸುವುದಲ್ಲದೇ ಹೆಣ್ಣು ಅಬಲೆಯಲ್ಲ ಸಬಲೆ ಎನ್ನುವ ಸಂದೇಶ ಸಾರುವ ಹಬ್ಬವೇ ಈ ದಸರಾ.
ದಸರಾ ಎಂದರೆ ಕೇವಲ ಗೊಂಬೆಯನ್ನು ಕೂರಿಸುವುದು ಬಣ್ಣದ ಬಟ್ಟೆಯನ್ನು ತೊಟ್ಟು ಸಂಭ್ರಮ ಪಡುವುದು ಮಾತ್ರವಲ್ಲ. ತನ್ನೊಳಗಿನ ದುರ್ಬಲತೆಯನ್ನು ಗೆದ್ದು ತಾನು ಶಕ್ತಿ ಸ್ವರೂಪಳೆಂದು ಅರಿವಾಗುವ ಪರ್ವಕಾಲ. ಅದೇ ರೀತಿ ದುಷ್ಟ ಶಕ್ತಿಗಳ ವಿರುದ್ಧ ದೈವ ಶಕ್ತಿಗಳ ವಿಜಯವನ್ನು ಸಂಭ್ರಮಿಸುವುದು ಮಾತ್ರವಲ್ಲ ನಮ್ಮೊಳಗೆ ನಮ್ಮೊಳಗಿನ ಕೆಟ್ಟ ಆಲೋಚನೆಗಳ ವಿರುದ್ಧ ಒಳ್ಳೆ ಆಲೋಚನೆಗಳು ಗೆಲುವು ಸಾಧಿಸಬೇಕೆಂಬ ಸಂಕಲ್ಪ ಮಾಡುವ ದಿನ. ಶಕ್ತಿಯ ಆರಾಧನೆಯಿಂದ ನಮ್ಮೊಳಗೆ ಆತ್ಮವಿಶ್ವಾಸ, ಅನ್ಯಾಯವನ್ನು ಎದುರಿಸುವ ಧೈರ್ಯ ಹಾಗೆಯೇ ಬದುಕಿನಲ್ಲಿ ಕುಗ್ಗಿದಾಗ ಪ್ರೇರಣೆಯನ್ನು ನೀಡುತ್ತದೆ. ಈ ದಸರವು ಪ್ರತಿಯೊಬ್ಬರ ಜೀವನದಲ್ಲಿ ಸನ್ಮಂಗಳವನ್ನು ಉಂಟು ಮಾಡಲಿ, ಸತ್ಯಕ್ಕೆ ಜಯವಾಗಲಿ, ಧರ್ಮದ ರಕ್ಷಣೆ ಆಗಲಿ.


