ವಿಜಯಪುರ: ಬಸವಣ್ಣನವರ ಕಾಯಕ ತತ್ವದಡಿ ಜನಸೇವೆ ಮಾಡುತ್ತಿರುವ ಎಂ. ಬಿ. ಪಾಟೀಲರು ಕರ್ನಾಟಕದ ಆಸ್ತಿಯಾಗಿದ್ದಾರೆ ಎಂದು ಖ್ಯಾತ ಚಲನಚಿತ್ರ ನಟಿ ರಮ್ಯ ಹೇಳಿದ್ದಾರೆ.
ತಿಕೋಟಾ ತಾಲೂಕಿನ ಜಾಲಗೇರಿ, ಜಾಲಗೇರಿ ಎಲ್.ಟಿ.1, ತಿಕೋಟಾ, ನಿಡೋಣಿ, ಬಬಲೇಶ್ವರಗಳಲ್ಲಿ ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಪರ ಪ್ರಚಾರ ಕೈಗೊಂಡು ರೋಡ್ ಶೋ ಕಾರ್ನರ್ ಮಿಟಿಂಗ್ನಲ್ಲಿ ಅವರು ಮಾತನಾಡಿದರು.
ಶ್ರೀ ಸಿದ್ಧೇಶ್ವರ ಸ್ವಾಮೀಜಿ ಬೊಗಸೆ ನೀರನ್ನು ಕೇಳಿದರು. ಆದರೆ, ಎಂ. ಬಿ. ಪಾಟೀಲರು ಹೊಳೆಯನ್ನು ಈ ಕಡೆ ಹರಿಸಿ ಜಲಕ್ರಾಂತಿ ಮಾಡಿದ್ದಾರೆ. ಈ ಮೂಲಕ ಜನರ ಜೀವನ ಮಟ್ಟವನ್ನು ಶಾಶ್ವತವಾಗಿ ಸುದಾರಿಸಿದ್ದಾರೆ. ಇಂಥ ನಾಯಕರನ್ನು ಆಶೀರ್ವದಿಸಿ ಗೆಲ್ಲಿಸಿದರೆ ವಿಜಯಪುರ ಜಿಲ್ಲೆ ಅಷ್ಟೇ ಅಲ್ಲ. ಇಡೀ ನಾಡಿಗೆ ಒಳ್ಳೆಯದಾಗಲಿದೆ ಎಂದು ಹೇಳಿದರು.
ನಾನು ತಂದೆಯನ್ನು ಕಳೆದುಕೊಂಡಾಗ ಮಂಡ್ಯಕ್ಕೆ ಬಂದಿದ್ದ ಎಂ. ಬಿ. ಪಾಟೀಲರು ನೈತಿಕವಾಗಿ ಧೈರ್ಯ ತುಂಬಿದ್ದರು. ಅಲ್ಲದೇ ಚುನಾವಣೆಯಲ್ಲಿ ನಾನು ಸಂಸತ್ ಸದಸ್ಯೆಯಾಗಲು ಸಹರಿಸಿದ್ದಾರೆ. ಅಷ್ಟೇ ಅಲ್ಲ, ಇಡೀ ನಾಡಿನಾದ್ಯಂತ ಕೆಲಸ ಮಾಡಿ ವಿಜಯಪುರ ಜಿಲ್ಲೆಗೆ ಕೀರ್ತಿ ಮತ್ತು ಹೆಸರನ್ನು ತಂದಿದ್ದಾರೆ. ಜಿಲ್ಲೆ ಮತ್ತು ರಾಜ್ಯಕ್ಕೆ ಅವರ ಸೇವೆ ಅಗತ್ಯವಾಗಿದೆ. ಅವರನ್ನು ಎಲ್ಲರೂ ಬೆಂಬಲಿಸಿ ಗೆಲ್ಲಿಸಬೇಕು. ಈ ಬಾರಿ ಕಾಂಗ್ರೆಸ್ನ್ನು ಗೆಲ್ಲಿಸಿದರೆ ಜನರ ಪರ ಯೋಜನೆಗಳು ಜಾರಿಯಾಗಲಿವೆ ಎಂದು ಹೇಳಿದರು.
ತಿಕೋಟಾದಲ್ಲಿ ಮಾತನಾಡಿದ ಆಶಾ ಎಂ. ಪಾಟೀಲ, ಎಂ. ಬಿ. ಪಾಟೀಲರ ಮೇಲೆ ತಾವೆಲ್ಲರೂ ಇಟ್ಟಿರುವ ಅಭಿಮಾನವನ್ನು ಉಳಿಸಿ ಬೆಳೆಸಬೇಕು. ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಪರಿಗಣಿಸಿ ಪ್ರಚಂಡ ಬಹುಮತದಿಂದ ಆರಿಸಿ ತರಬೇಕು. ಈ ಮೂಲಕ ಸರ್ವಜನರ ಸರ್ವಾಂಗೀಣ ಅಭಿವೃದ್ಧಿಗೆ ಬೆಂಬಲ ನೀಡಬೇಕು ಎಂದು ಹೇಳಿದರು.
ನಿಡೋಣಿಯಲ್ಲಿ ಮಾತನಾಡಿದ ಬಸನಗೌಡ(ರಾಹುಲ) ಎಂ. ಪಾಟೀಲ ಮಾತನಾಡಿ ಇದು ಧರ್ಮ ಮತ್ತು ಅಧರ್ಮದ ಮದ್ಯೆ ನಡೆಯುತ್ತಿರುವ ಚುನಾವಣೆಯಾಗಿದೆ. ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕಾ? ಅಥವಾ ದಾರಿತಪ್ಪಬೇಕಾ? ಎಂದು ಯೋಚಿಸಿ ನಿರ್ಧರಿಸಿ. ಎಂ. ಬಿ. ಪಾಟೀಲರನ್ನು ಭಾರಿ ಅಂತರದಿಂದ ಗೆಲ್ಲಿಸುವ ಮೂಲಕ ಬಬಲೇಶ್ವರ ಮತಕ್ಷೇತ್ರ ಮತ್ತಷ್ಟು ಅಭಿವೃದ್ಧಿಯಾಗುವಂತೆ ಮಾಡೋಣ ಎಂದು ಹೇಳಿದರು.
ಬಬಲೇಶ್ವರದಲ್ಲಿ ಮಾತನಾಡಿದ ಜಿ.ಪಂ. ಮಾಜಿ ಅಧ್ಯಕ್ಷ ವಿ.ಎಸ್.ಪಾಟೀಲ, ಮತದಾರರು ಜಾತಿ ರಾಜಕಾರಣಕ್ಕೆ ಮಣೆ ಹಾಕಬಾರದು. ನಮ್ಮ ಜೀವನ ಸುಖಮಯವಾಗಿರಲು ಶಾಶ್ವತ ಪರಿಹಾರ ಒದಗಿಸಿರುವ ಎಂ. ಬಿ. ಪಾಟೀಲ ಅವರನ್ನು ಕಳೆದ ಬಾರಿಗಿಂತಲೂ ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ರೇಣುಕಾ ಸುನೀಲಗೌಡ ಪಾಟೀಲ, ಕಲ್ಪನಾ ಪಾಟೀಲ, ರಾಜುಗೌಡ ಪೋಲೀಸ್ ಪಾಟೀಲ, ಭಾಗೀರಥಿ ತೇಲಿ, ಗೀತಾಂಜಲಿ ಪಾಟೀಲ, ಪ್ರತಿಭಾ ಪಾಟೀಲ, ವಿದ್ಯಾರಾಣಿ ತುಂಗಳ, ಶ್ರೀಶೈಲಗೌಡ ಪಾಟೀಲ ನಿಡೋಣಿ, ವಿ.ಎಸ್.ಪಾಟೀಲ, ಈರನಗೌಡ ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಚಿತ್ರನಟಿ ರಮ್ಯಾ ಮತ್ತು ಎಂ. ಬಿ. ಪಾಟೀಲ ಅವರ ಕುಟುಂಬ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರನ್ನು ಗ್ರಾಮಸ್ಥರು ಹೂಮಳೆ ಸುರಿಸುವ ಮೂಲಕ ಭರ್ಜರಿ ಸ್ವಾಗತ ಕೋರಿದ್ದು ಗಮನ ಸೆಳೆಯಿತು.